ಒಂದು ರಚ್ಚೆ ಹಿಡಿದ ಮಳೆಯ ರಾತ್ರಿ..

ಇವತ್ತು ಜೋರು ಮಳೆ.. ಗುಡುಗು ಸಿಡಿಲು… ಎಲ್ಲಾ ತುಂಬಾ ಆರ್ಭಟ…

ನಿನ್ನ ನೆನಪಿನಂತೆ.. ತುಂಬಾ ತೀವ್ರ..

ಮೋಡದ ಜೊತೆ ಸ್ಪರ್ಧೆಗೆ ಇಳಿದಂತೆ ನನ್ನ ಕಣ್ಣು ಮಳೆಗಿಂತ ರಭಸವಾಗಿ ಸುರಿಸ್ತಿದೆ ಕಣ್ಣೀರು.. ಒಂಟಿಯಾಗಿದ್ದಾಗ, ಅದೂ ಕತ್ತಲಲ್ಲಿ ಯಾಕೆ ನನ್ನ ಹೀಗೆ ಕಾಡ್ತ್ಯ ನೀನು? ನಿನ್ನ ಮರೆಯೋ ಪ್ರತಿ ಪ್ರಯತ್ನನು ಹೊಸ ಸ್ಮೃತಿಯನ್ನು ನೆನಪು ಮಾಡಿಕೊಟ್ಟ ಹಾಗೆ.. ಪ್ರತಿ ಕಣ್ಣೀರ ಹನೀನು ನಿನ್ನ ಇನ್ನೂ ಎದೆಯಾಳಕ್ಕೆ ನೂಕೋ ಹಾಗೆ.. ಯಾಕೆ ಹೀಗೆಲ್ಲ.. ಅಷ್ಟು ಬೆರೆತೋಗಿದ್ಯ ನನ್ನೊಳಗೆ?

ಅಗಲಿ ಎಷ್ಟು ವರ್ಷ ಆಯಿತು ನೀನು.. ಆದರೂ ಯಾಕೆ ನೆನ್ನೆಯಷ್ಟೇ ಜೊತೆಗಿದ್ದ ಹಾಗೆ, ಇವತ್ತು ಬೆಳೆಗ್ಗೆ ದೂರ ಆದ ಹಾಗೆ.. ಜೊತೆಗೆ ಹಸಿ ಹಸಿ ಕಣ್ಣೇರು ಬೇರೆ…

“ಬೀಳೋ ಮಳೆ ಅಂದ ಇರೋದು ಅದರ ಒಡಲಲ್ಲಿ.. ಅದು ಹುಟ್ಟೋ ಆಕಾಶದಲ್ಲಿ… ಉಕ್ಕಿಸಿ ಉಕ್ಕಿಸಿ ಅದನ್ನ ಆಚೆ ತಳ್ಳೋ ಮೋಡದಲ್ಲಿ” ಅಂದಿದ್ದೆ ಅಲ್ವ ನೀನು…. ವಿರಹದಿಂದ ನೊಂದ ಪ್ರೇಮಿಯ ಕಣ್ಣೀರೂ ಅಷ್ಟೇ ಅಲ್ವ.. ನೀರು ಕಣ್ಣಿಂದ ಸುರಿಯುತ್ತೆ ಅನ್ಸೋದೆ ಇಲ್ಲ…ಹೊಟ್ಟೆ ಎಲ್ಲ ತಿರುಚಿ ಅದರ ಮೂಲದಿಂದ ಉಕ್ಕಿ ಹರಿಯುತ್ತಲ್ವ.. ಕಡೆಗೆ ಮಳೆ ನಿಂತ ಹಾಗೆ ನಿಲ್ಲುತ್ತೆ…. ಮಳೆಯಲ್ಲಿ ನೆಂದ ಭೂಮಿ ಹೇಗೆ ಪ್ರಶಾಂತವಾಗುತ್ತೋ ಹಾಗೆ ಮನಸು ಸಹ ತೃಪ್ತಿಯಾಗಿ ಮತ್ತೊಂದು ಮಳೆಗೆ ಸಜ್ಜಾಗುತ್ತೆ… ಇದು ನಿರಂತರ… ಪ್ರಾಕೃತ..

ಯಾಕಿಂದು ನೀನು ಇಷ್ಟು ನೆನಪಾದೆ? ಮಳೆ ಅಂದ್ರೆ ನಿಂಗೆ ಇಷ್ಟ ಅಂತ ನಂಗೆ ಯಾಕೆ ಹೇಳಿದ್ದೆ? ಪ್ರತಿ ಬಾರಿ ಮಳೆ ಬಂದಾಗಲು ಮನಸು ನಿನ್ನಲ್ಲಿಗೆ ಓಡಿ ಬರಲಿ ಅನ್ನೋ ಸ್ವಾರ್ಥಕ್ಕ? ಅಥವಾ ನಾನು ನಿನ್ನ ಮರ್ತಿದ್ರೆ ಮಳೆ ನಿನ್ನ ನೆನಪಿಸಲಿ ಅನ್ನೋ ದುರಾಲೋಚನೇನ? ಮರೆಯೋದಾದ್ರು ಹೇಗೆ ನಿನ್ನ… ಮಳೆ ಬಂದು ನೆನಪಿಸೋಕೆ… ಆ ಭೂಮಿಗಾದ್ರು ಸೂರ್ಯ ಇದಾನೆ.. ಒಣಗಿಸಿ ಮಳೆಯ ಕುರುಹು ಇಲ್ಲದ ಹಾಗೆ ಮಾಡಲಿಕ್ಕೆ… ಆದ್ರೆ ನನ್ನ ಸೂರ್ಯ , ಬೆಳಕು ಎಲ್ಲ ಆಗಿದ್ದ ನೀನೆ ಇಲ್ಲ ಈಗ.. ಇನ್ನು ಮಳೆಯನ್ನು ಮರೆಯೋದು ಹೇಗೆ?

ಮತ್ತೆ ಮಳೆ ಹಾಗೆ ಬರ್ತೀಯ ನನ್ನ ಜೀವನಕ್ಕೆ?… ನೀನಿಲ್ಲದೆ ಅದು ಬರಡಾಗಿದೆ…ನಿನ್ನ ಪ್ರೀತಿಯನ್ನು ಸುರಿಸಿ ಅದನ್ನು ಮತ್ತೆ ಚಿಗುರಿಸ್ತ್ಯ?

ನಿನ್ನ ನೆಂದ ಕೂದಲಿನ ತುದಿಯಿಂದ ತೊಟ್ಟಿಕ್ಕುವ ಆ ನೀರ ಹನಿಯನ್ನು ನೋಡದೇನೆ ನನ್ನ ಕಣ್ಣು ಹನಿಸುವುದನ್ನು ನಿಲ್ಲಿಸಿಬಿಡುತ್ತೇನೋ ಅನ್ನೋ ತುಮುಲದೊಂದಿಗೆ ಬದುಕಿರುವೆ..

3 Comments

 • Nisha May 30, 2012 at 14:45

  ಪ್ರತಿ ಬಾರಿ ಮಳೆ ಬಂದಾಗಲು ಮನಸು ನಿನ್ನಲ್ಲಿಗೆ ಓಡಿ ಬರಲಿ ಅನ್ನೋ ಸ್ವಾರ್ಥಕ್ಕ? ಅಥವಾ ನಾನು ನಿನ್ನ ಮರ್ತಿದ್ರೆ ಮಳೆ ನಿನ್ನ ನೆನಪಿಸಲಿ ಅನ್ನೋ ದುರಾಲೋಚನೇನ? liked these lines ..
  whom u referring to 😉 personnel experience or public 😛

  Reply
  • suhas May 30, 2012 at 15:15

   Thanks Nisha.. Its a story again!! so nothing related to experience!! 🙂

   Reply
   • Nisha May 30, 2012 at 15:17

    There is no good imagination without experience 😉

    Reply

Leave a Comment

This site uses Akismet to reduce spam. Learn how your comment data is processed.

Instagram
LinkedIn
LinkedIn
Share
RSS